ಕೆಲ್ಟ್ ಜನಾಂಗ

ಕ್ರಿಸ್ತಪೂರ್ವ ಒಂದನೆಯ ಸಹಸ್ರಮಾನದಲ್ಲಿ ಐರೋಪ್ಯ ಸಂಸ್ಕøತಿಯ ಬೆಳೆವಣಿಗೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಒಂದು ಜನಾಂಗ. ಕೆಲ್ಟ್ ಜನರು ಪ್ರಾಚೀನ ಕಾಲದಲ್ಲಿ ಆಲ್ಟ್ಸ್ ಪರ್ವತದ ಉತ್ತರದ ಸಮಶೀತೋಷ್ಣ ಪ್ರದೇಶದಲ್ಲಿ ಪ್ರಸಿದ್ಧಿಗೆ ಬಂದರು. ಗ್ರೀಕ್ ಚರಿತ್ರಕಾರರು ಇವರನ್ನು ಕೆಲ್ಟಾಯ್ ಎಂದು ಕರೆದರು. ಇದರ ಆಧಾರದ ಮೇಲೆ ಕೆಲ್ಟ್ ಎಂಬ ಪದ ಬಳಕೆಗೆ ಬಂದಿದೆ. ರೈನ್ ಮತ್ತು ಡ್ಯಾನ್ಯೂಬ್ ನದಿಗಳ ದಂಡೆಗಳಲ್ಲಿ ಮೊಟ್ಟಮೊದಲು ವಾಸಿಸುತ್ತಿದ್ದ ಇವರು ಕಾಲಕ್ರಮದಲ್ಲಿ ದಕ್ಷಿಣ ಮತ್ತು ಪಶ್ಚಿಮದ ಕಡೆಗೆ ಹರಡಿಕೊಂಡರು.

ಕೆಲ್ಪರ ಉಗಮದ ಬಗೆಗೆ ಸಾಕಷ್ಟು ಮಾಹಿತಿಗಳಿಲ್ಲ. ಕ್ರಿ.ಪೂ.12 ನೆಯ ಶತಮಾನದಲ್ಲಿದ್ದ ಯೂರೋಪಿನಲ್ಲಿ ಆರ್ನ್‍ಫೀಲ್ಡ್ ಸಂಸ್ಕøತಿಯೂ ಅನಂತರ ಹಾಲ್‍ಸ್ಟಾಟ್ ಸಂಸ್ಕøತಿಯೂ ನೆಲೆಸಿದ್ದ ಪ್ರದೇಶಗಳು ಕೆಲ್ಪರ ಅಧಿಪತ್ಯಕ್ಕೆ ಒಳಪಟ್ಟಿದ್ದುವೆಂದು ಗ್ರೀಕ್ ಚರಿತ್ರಕಾರರು ತಿಳಿಸಿದ್ದಾರೆ. ಕ್ರಿ.ಪೂ.7 ನೆಯ ಶತಮಾನದಲ್ಲಿ ಇವರು ಬವೇರಿಯ ಮತ್ತು ಬೊಹಿಮಿಯಗಳಲ್ಲಿ ವಾಸವಾಗಿದ್ದು, 7ನೆಯ ಮತ್ತು 6ನೆಯ ಶತಮಾನಗಳಲ್ಲಿ ಪಶ್ಚಿಮದ ಕಡೆ ಹರಡಿದರು. ಕೆಲ್ಟರು ಗ್ರೀಕರೊಡನೆ ಮಸ್ಸಿಲಿಯದಲ್ಲಿ ವ್ಯಾಪಾರ ಸಂಬಂಧಗಳನ್ನು ಬೆಳೆಸಿಕೊಂಡ ಮೇಲೆ ಗ್ರೀಕ್ ಚರಿತ್ರಕಾರರ ಬರೆವಣಿಗೆಗಳಲ್ಲಿ ಕೆಲ್ಟರ ವಿಚಾರ ಹೆಚ್ಚು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಕ್ರಿ.ಪೂ.5ನೆಯ ಶತಮಾನದ ಅನಂತರ ಕೆಲ್ಟರ ಚರಿತ್ರೆ ಸ್ಪಷ್ಟವಾಗುತ್ತದೆ. ಕ್ರಿ.ಪೂ.390ರಲ್ಲಿ ಇವರು ರೋಂ ನಗರವನ್ನು ದಾಳಿಮಾಡಿ, ಸಿಸಿಲಿಯವರೆಗೂ ಹರಡಿದರು. ಕ್ರಿ.ಪೂ. 335ರಲ್ಲಿ ಕೆಲ್ಟರ ನಿಯೋಗವೊಂದು ಅಲೆಕ್ಸಾಂಡರ್ ಮಹಾಶಯನನ್ನು ಭೇಟಿಮಾಡಿತು. ಕ್ರಿ.ಪೂ. 279ರಲ್ಲಿ ಕೆಲ್ಟರು ಡೆಲ್ಫಿಯ ಮೇಲೆ ದಂಡೆತ್ತಿಹೋದರು. ಆದರೆ ಏಟೋಲಿಯನರು ಇವರನ್ನು ಸೋಲಿಸಿದರು. ಅನಂತರ ಕೆಲ್ಟಿಕ್ ಜನರು ಏಷ್ಯ ಮೈನರ್ ಪ್ರದೇಶದಲ್ಲಿ ದಾಳಿ ನಡೆಸಿ ಅಲ್ಲಿ ಬಹು ಕಷ್ಟನಷ್ಟಗಳನ್ನುಂಟು ಮಾಡಿದರು. ಸುತ್ತಮುತ್ತಲಿನ ಪ್ರದೇಶಗಳ ಮೇಲೆ ದಂಡೆತ್ತಿಹೋಗಿ ಅಪಾರ ನಷ್ಟ ಉಂಟುಮಾಡುತ್ತಿದ್ದ ಇವರನ್ನು ಒಂದನೆಯ ಅಟ್ಟಾಲಸ್ ಕ್ರಿ.ಪೂ.230ರಲ್ಲಿ ಸೋಲಿಸಿದ; ಅನಂತರ ಇವರು ಗಾಲ್ ಪ್ರದೇಶದಲ್ಲಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರು. ಬ್ರಿಟನ್ ಮತ್ತು ಐರ್ಲೆಂಡ್‍ಗಳಲ್ಲೂ ಕೆಲ್ಟಿಕ್ ಜನರ ದಾಳಿಗಳು ನಡೆದುವು. ಬ್ರಿಟನ್ನಿಗೆ ಲಾಟೆನೆ ಸಂಸ್ಕøತಿ ಬರಲು ಕೆಲ್ಟರೇ ಕಾರಣರೆಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಈ ಸಂಸ್ಕøತಿ ಉನ್ನತಮಟ್ಟದಲ್ಲಿದ್ದು ಕಲೆಯಲ್ಲಿ ಹೆಚ್ಚು ಪ್ರಸಿದ್ಧಿ ಗಳಿಸಿತ್ತು. ಕೆಲ್ಟಿಕ್ ಜನಾಂಗದ ವಿವಿಧ ಗುಂಪುಗಳ ಜನರು ಯೂರೋಪಿನ ವಿವಿಧ ಭಾಗಗಳಲ್ಲಿ ತಮ್ಮ ಪ್ರಭಾವ ಬೀರಿದರು.

ಕೆಲ್ಟ್ ಜನರ ಜೀವನ ಮತ್ತು ಧಾರ್ಮಿಕ ಪದ್ಧತಿಗಳನ್ನು ಕುರಿತ ವಿವರಗಳು ಚರಿತ್ರಕಾರರಿಂದ ತಿಳಿದು ಬರುತ್ತದೆ. ಕೆಲ್ಟರು ಆಭರಣಪ್ರಿಯರೆಂದು ಸಾಹಿತ್ಯ ಗ್ರಂಥಗಳಲ್ಲಿ ಉಲ್ಲೇಖಗಳುಂಟು. ಚಿನ್ನದ ಮತ್ತು ಕಂಚಿನ ಕಂಠಾಭರಣಗಳು ಇವರಿಗೆ ಬಹು ಪ್ರಿಯವಾಗಿದ್ದುವು. ಇದು ಲಾ ಟೆನೆ ಸಂಸ್ಕøತಿಯ ಕಾಲದಲ್ಲಿ ವಿಶೇಷವಾಗಿ ಬಳಕೆಯಲ್ಲಿತ್ತು. ಈ ಆಭರಣಗಳು ವಿಶೇಷವಾಗಿ ಸ್ತ್ರೀಯರ ಮತ್ತು ವೀರಪುರುಷರ ಗೋರಿಗಳಲ್ಲಿ ದೊರಕಿವೆ. ಬಟ್ಟೆಗಳನ್ನು ಸೇರಿಸಿ ಚುಚ್ಚಿಕೊಳ್ಳುವ ಕಂಚಿನ ಪಿನ್ನುಗಳು ವಿಶೇಷವಾಗಿ ದೊರಕಿವೆ, ಇವರು ಉಣ್ಣೆ ಮತ್ತು ಹತ್ತಿಯ ಇಜಾರಗಳನ್ನು ಧರಿಸುತ್ತಿದ್ದರು. ಬಟ್ಟೆಯನ್ನು ಹೊದ್ದುಕೊಂಡು ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಳ್ಳುವ ಪದ್ಧತಿ ವಿಶೇಷವಾಗಿತ್ತೆಂಬುದು ಶಿಲ್ಪಗಳಿಂದ ಗೊತ್ತಾಗುತ್ತದೆ. ಡೈಯೊಡೋರಸ್, ಪ್ಲಿನಿ ಮುಂತಾದ ಚರಿತ್ರಕಾರರು ಕೆಲ್ಟ್ ಶ್ರೀಮಂತರ ಬಣ್ಣಬಣ್ಣದ ಉಡುಪುಗಳನ್ನು ಹೊಗಳಿದ್ದಾರೆ. ಐರ್ಲೆಂಡಿನಲ್ಲಿ ಚರ್ಮದ ಪಾದರಕ್ಷೆಗಳನ್ನು ಉಪಯೋಗಿಸುತ್ತಿದ್ದರು.

ಇವರ ಸಾಮಾಜಿಕ ಜೀವನದಲ್ಲಿ ಅನೇಕ ಭೇದಗಳಿವೆ. ಐರ್ಲೆಂಡಿನಲ್ಲಿ ಸಮಾಜದ ಮೂಲಘಟಕ ಟೌತ್. ಟೌತ್ ಎಂದರೆ ಜನ ಎಂದೇ ಅರ್ಥ. ಇದರಲ್ಲಿ ಮೂರು ವಿಭಾಗಗಳಿದ್ದುವು: ರಾಜರು, ಶ್ರೀಮಂತರು ಮತ್ತು ಸಾಮಾನ್ಯರು. ಇವು ಕೇವಲ ಸಾಮಾಜಿಕ ವರ್ಗಗಳು. ರಾಜ ಮರಣ ಹೊಂದಿದಾಗ ಅವನ ಬಂಧುಗಳಲ್ಲಿ ಒಬ್ಬನನ್ನು ಮುಂದಿನ ರಾಜನನ್ನಾಗಿ ಅರಿಸುತ್ತಿದ್ದರು. ರಾಜತ್ವ ವಂಶಪಾರಂಪರ್ಯವಾಗಿರಲಿಲ್ಲ. ಸಾಮಾನ್ಯವಾಗಿ ಪುರೋಹಿತರು ಶ್ರೀಮಂತವರ್ಗಕ್ಕೆ ಸೇರಿದ್ದರು. ಭೂಮಿಯನ್ನು ಉಳುವ ರೈತರು ಸಾಮಾನ್ಯವರ್ಗದವರು. ಸಾಮಾನ್ಯರಿಗೆ ಟೌತ್‍ನೊಳಗೇ ಮದುವೆಗೆ ಅವಕಾಶವಿತ್ತು. ವೈಯಕ್ತಿಕವಾಗಿ ಯಾರಿಗೂ ಆಸ್ತಿಯ ಹಕ್ಕು ಇರಲಿಲ್ಲ. ಆಸ್ತಿ ಕುಲಕ್ಕೆ ಸೇರಿದ್ದು. ಆ ಕುಲದ ಮುಖಂಡರು ಮಾತ್ರ ಅದನ್ನು ರೂಢಿಸಬಹುದಿತ್ತು. ಆದರೆ ಅದನ್ನು ಮಾರುವ ಹಕ್ಕು ಮುಖಂಡರಿಗೂ ಇರುತ್ತಿರಲಿಲ್ಲ. ಇದರಿಂದ ಕುಲಗಳ ಬೆಳೆವಣಿಗೆಗೆ ಅವಕಾಶವಾಯಿತು. ಪ್ರತಿಯೊಬ್ಬನ ಅಂತಸ್ತನ್ನೂ ನಿರ್ಧರಿಸಲು ಒಂದು ವಿಧವಾದ ಮೌಲ್ಯವಿತ್ತು. ವ್ಯಕ್ತಿ ಅಪರಾಧ ಮಾಡಿದರೆ ಅವನ ಘನತೆಯ ಮೌಲ್ಯವನ್ನು ಕಡಿಮೆ ಮಾಡುವುದು ಮುಖ್ಯ ಶಿಕ್ಷೆಗಳಲ್ಲೊಂದಾಗಿತ್ತು. ಸಾಮಾನ್ಯವಾದ ಅಪರಾಧಗಳನ್ನು ವಿಚಾರಿಸುವುದು ಮತ್ತು ಶಿಕ್ಷೆಯನ್ನು ವಿಧಿಸುವುದು ಕುಲ ಮುಖ್ಯರ ಕರ್ತವ್ಯ. ದೊಡ್ಡದೊಡ್ಡ ಅಪರಾಧಗಳನ್ನು ಕುರಿತ ವಿಚಾರಣೆಯನ್ನು ರಾಜನೇ ನಡೆಸುತ್ತಿದ್ದ. ಅಗಾಗ್ಗೆ ನಡೆಯುತ್ತಿದ್ದ ಉತ್ಸವಗಳಲ್ಲಿ ಅಪರಾಧ ವಿಮರ್ಶೆ ಕೂಡ ನಡೆಯುತ್ತಿದ್ದುದುಂಟು. ಆಗ ರಾಜ ನ್ಯಾಯಪತಿಗಳ ಸಹಾಯ ಪಡೆಯುತ್ತಿದ್ದ.

ಗಾಲ್ ಸಮಾಜದ ಸ್ಥಿತಿಗಳು ಐರಿಷ್ ಕೆಲ್ಟ್ ಸಮಾಜದವಕ್ಕಿಂತ ಸ್ವಲ್ಪ ಭಿನ್ನವಾಗಿದ್ದವು. ಅಲ್ಲಿ ರಾಜತ್ವಕ್ಕೆ ಪ್ರಾಮುಖ್ಯವಿರಲಿಲ್ಲ. ಸಾಮಾಜಿಕ ವಿಷಯಗಳಲ್ಲಿ ಜನಾಂಗಗಳ ಮುಖಂಡರದೇ ಪ್ರಾಮುಖ್ಯ.

ಇವರ ಮುಖ್ಯ ಕಸಬು ಕೃಷಿ ಮತ್ತು ಪಶುಪಾಲನೆ. ಗೋಧಿ ಮತ್ತು ಬಾರ್ಲಿ ಮುಖ್ಯ ಬೆಳೆಗಳು. ಇವರು ಹಂದಿ, ಕುರಿಗಳನ್ನು ಸಾಕುತ್ತಿದ್ದರು. ಪುರಾತತ್ವಶೋಧನೆಗಳಿಂದ ತಿಳಿದುಬಂದಿರುವಂತೆ ಆರ್ನ್‍ಫೀಲ್ಡ್, ಹಾಲ್‍ಸ್ಟಾಟ್ ಮತ್ತು ಲಾ ಟೆನೆ ಸಂಸ್ಕøತಿಗಳಲ್ಲಿ ಆಯಾಕಾರದ ಮನೆಗಳು ಸಾಮಾನ್ಯವಾಗಿದ್ದುವು. ಆದರೆ ಸ್ಪೇನ್, ಪೋರ್ಚುಗಲ್, ಬ್ರಿಟನ್ ಮತ್ತು ಐರ್ಲೆಂಡ್‍ಗಳಲ್ಲಿ ವೃತ್ತಾಕಾರದ ಮನೆಗಳೇ ವಿಶೇಷವಾಗಿದ್ದುವು. ಈ ಮನೆಗಳು ಮಧ್ಯೆಯೂರೋಪಿನ ಪ್ರದೇಶಗಳಲ್ಲಿ ಬಹು ಪ್ರಾಚೀನಕಾಲಕ್ಕೂ, ಅಟ್ಲಾಂಟಕ್ ಕರಾವಳಿಯಲ್ಲಿ ಸುಮಾರಾಗಿ ಹೊಸ ಶಿಲಾಯುಗ ಮತ್ತು ಕಂಚಿನ ಯುಗದ ಕಾಲಕ್ಕೂ, ಅಟ್ಲಾಂಟಿಕ್ ಕರಾವಳಿಯಲ್ಲಿ ಸುಮಾರಾಗಿ ಹೊಸ ಶಿಲಾಯುಗ ಮತ್ತು ಕಂಚಿನ ಯುಗದ ಕಾಲಕ್ಕೂ ಸೇರುತ್ತವೆ. ಐರ್ಲೆಂಡಿನಲ್ಲಿ ದೊರಕಿರುವ, ಮರದಿಂದ ಮಾಡಿದ, ಮನೆಗಳು ಕ್ರಿಸ್ತಶಕದ ಮೊದಲ ಶತಮಾನಕ್ಕೆ ಸೇರುತ್ತವೆ. ಕೆಲ್ಟಿಕ್ ವಾಸಸ್ಥಾನಗಳಲ್ಲಿ ಕಂಡುಬಂದಿರುವ ಇನ್ನೊಂದು ಮುಖ್ಯ ಅಂಶವೆಂದರೆ ಧಾನ್ಯಗಳನ್ನು ಕೂಡಿಡಲು ನೆಲದಲ್ಲಿ ಮಾಡಿದ ಹಗೇವುಗಳು. ಸಾಮಾನ್ಯವಾಗಿ ಇವು ಗದ್ದೆ ಹೊಲ ಇಲ್ಲವೇ ಮನೆಗಳಲ್ಲಿರುತ್ತಿದ್ದುವು. ಕೆಲ್ಟರ ಕಲಾತ್ಮಕವಾದ ನಾಣ್ಯಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಮ್ಯಾಸಿಡೋನಿಯ ರಾಜ್ಯದ ನಾಣ್ಯಗಳ ರೀತಿಯ ಚಿನ್ನದ ನಾಣ್ಯಗಳು ಮತ್ತು ದಕ್ಷಿಣ ಗಾಲ್‍ನಲ್ಲಿ ಬಳಕೆಯಲ್ಲಿದ್ದ ಬೆಳ್ಳಿಯ ನಾಣ್ಯಗಳು.

ಕೆಲ್ಟರು ಶೂರರೂ ಯುದ್ಧಪ್ರಿಯರೂ ಆಗಿದ್ದರೆಂದು ಗ್ರೀಕರ ಬರೆವಣಿಗೆಗಳಿಂದ ಸ್ಪಷ್ಟವಾಗುತ್ತದೆ. ಕಂಚಿನ ಯುಗದಲ್ಲಿ ಕೆಲ್ಟರು ಕತ್ತಿ, ಗುರಾಣಿ, ಬಾಣದ ಮೊನೆಗಳನ್ನು ಉಪಯೋಗಿಸುತ್ತಿದ್ದರು. ಕಬ್ಬಿಣಯುಗದ ಅನಂತರ ಇವರ ಯುದ್ಧಸಾಮಗ್ರಿಗಳು ಸುಧಾರಿಸಿದುವು. ಉದ್ದನೆಯ ಕತ್ತಿ ಮತ್ತು ಭರ್ಜಿಗಳು ಬಳಕೆಗೆ ಬಂದುವು. ರಥ ಮತ್ತು ಅಶ್ವಗಳನ್ನೂ ಯುದ್ಧದಲ್ಲಿ ವಿಶೇಷವಾಗಿ ಬಳಸಲು ಆರಂಭವಾಯಿತು. ಯುದ್ಧಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕೆಲವಯ ಯೋಧರು ಬೆತ್ತಲೆಯಾಗಿ ಯುದ್ಧ ಮಾಡುತ್ತಿದ್ದರೆಂದು ಪಾಲಿಬಸ್ ಉಲ್ಲೇಖಿಸುತ್ತಾನೆ. ಶತ್ರುಗಳ ತಲೆ ಕಡಿದು ಅವರ ರುಂಡಗಳನ್ನು ಕುದುರೆಯ ಲಗಾಮಿಗೆ ತೂಗುಹಾಕುವುದು ಇವರ ಪದ್ಧತಿಯಾಗಿತ್ತೆಂದು ಗ್ರೀಕರ ಬರೆವಣಿಗೆಗಳಿಂದ ಗೊತ್ತಾಗುತ್ತದೆ. ಯುದ್ಧದಲ್ಲಿ ವಿಜಯ ಗಳಿಸಿದ ಅನಂತರ ವಿವಿಧ ಹಬ್ಬಗಳನ್ನು ಆಚರಿಸುವುದು ಇವರ ಪದ್ಧತಿಯಾಗಿತ್ತು ಕೆಲ್ಟರ ಧಾರ್ಮಿಕ ಮತ್ತು ಮತೀಯ ಭಾವನೆಗಳು ಆದಿಮಜನರ ಸಂಸ್ಕøತಿಯನ್ನು ಬಹುವಾಗಿ ಹೋಲುತ್ತವೆ. ಮಾಟಮಂತ್ರಗಳಲ್ಲಿ ಇವರಿಗೆ ವಿಶೇಷ ನಂಬಿಕೆ. ತಮ್ಮ ಜೀವನದ ಎಲ್ಲ ಪರಿಸರಗಳಲ್ಲೂ ಅಲೌಕಿಕ ಶಕ್ತಿ ಅಡಗಿದೆಯೆಂದೂ ಅದನ್ನು ತಮಗೆ ಅನುಕೂಲಕರವಾಗಿ ನಡೆಸಿಕೊಳ್ಳುವುದು ತಮ್ಮ ಮುಖ್ಯ ಕರ್ತವ್ಯವೆಂದೂ ಅವರು ನಂಬಿದ್ದರು. ಕಲ್ಟ್ ದೇವತೆಗಳಲ್ಲಿ ಡಗ್ಡ ಪ್ರಧಾನ. ಈತ ಸೇವಕನಂತೆ ಅರೆ ಬೆತ್ತಲಾಗಿದ್ದು ಬಹು ದೊಡ್ಡ ಗದೆಯನ್ನು ಹಿಡಿದಿರುತ್ತಾನೆ. ಇವನಿಗೆ ಅನಂತ ಶಕ್ತಿಯಿದೆ. ಇದರಿಂದ ನಿಸ್ಸಾರವಾದ ಭೂಮಿಯನ್ನು ಇವನು ಸಾರವತ್ತಾಗಿ ಮಾಡುತ್ತಾನೆ. ಲಗ್ ಮತ್ತೊಂದು ದೇವತೆ. ಈತ ಯುವಕನಾದರೂ ಡಗ್ಗನಷ್ಟು ಪ್ರಭಾವಶಾಲಿಯಲ್ಲ. ಐರ್ಲೆಂಡಿನಲ್ಲಿ ಬಹು ಮುಖ್ಯವಾದ ಸಮಾಯಿನ್ ಎಂಬ ಹಬ್ಬದಲ್ಲಿ ಡಗ್ಡದೇವತೆ ಪ್ರಕೃತಿದೇವತೆಯಾದ ಮೊರ್ರಿ ಗನ್ ಜೊತೆ ಸೇರಿ ಭೂಮಿಯನ್ನು ಫಲವತ್ತಾಗಿ ಮಾಡಿ ಮುಂದಿನ ವರ್ಷದ ಬೆಳೆಗೆ ಸಹಾಯ ಮಾಡುತ್ತಾಗಿ ಮಾಡಿ ಮುಂದಿನ ವರ್ಷದ ಬೆಳೆಗೆ ಸಹಾಯ ಮಾಡುತ್ತಾನೆಂದು ನಂಬಿಕೆ. ಈ ದೇವತೆಗಳಿಗೆ ಸಮಾಯಿನ್ ಹಬ್ಬದಲ್ಲಿ ಬಲಿಕೊಡುವ ಪದ್ಧತಿ ಇತ್ತು. ಬೆಲಟೈನ್ ಎನ್ನುವುದು ಹಬ್ಬ. ಈ ಹಬ್ಬದ ದಿನದಲ್ಲಿ ಬೆಂಕಿಯನ್ನು ಹೊತ್ತಿಸಿ ಅದರ ಮೇಲೆ ಪಶುಗಳನ್ನು ಓಡಿಸುತ್ತಿದ್ದರು. ಇದರಿಂದ ಪಶುಗಳಿಗೆ ಕಾಯಿಲೆಗಳು ಬರುವುದಿಲ್ಲವೆಂಬುದು ಅವರ ನಂಬಿಕೆಯಾಗಿತ್ತು ಇಂಬಲ್ಕ್ ಮತ್ತು ಲುಗ್ನಸದ್ ಇವು ಕೆಲ್ಟರ ಇತರ ಮುಖ್ಯ ಹಬ್ಬಗಳು. ಯುದ್ಧಗಳಲ್ಲಿ ಕೆಲ್ಟರನ್ನು ಹುರಿದುಂಬಿಸಲು ಅನೇಕ ಸ್ತ್ರೀದೇವತೆಗಳಿದ್ದರು. ಬದ್ಸ್ ದೇವತೆಗೆ ಕೆಂಪು ಹುಬ್ಬು, ಕೆಂಪು ಉಡುಪು. ಇವಳ ವಾಹನ ಕುದುರೆ. ಇವಳು ಯೋಧರಿಗೆ ಪೂಜ್ಯಳಾದ ದೇವತೆ. ಇವಳಿಗೆ ಹಕ್ಕಿಯ ರೂಪವೂ ಇತ್ತು.
ಕೆಲ್ಟ್ ಮತೀಯ ನಂಬಿಕೆಗಳಲ್ಲಿ ತ್ರಿಮುಖ ದೇವತೆಗಳಿಗೆ ವಿಶಿಷ್ಟಸ್ಥಾನವಿತ್ತು. ಇವು ಒಬ್ಬ ದೇವತೆಯಾಗಿಯೂ ಇರಲಿಲ್ಲ. ಒಂದೇ ದೇವತೆಗೆ ಮೂರರಷ್ಟು ಅಂದರೆ ಮಿತಿಯಿಲ್ಲದಷ್ಟು ಸಾಮಥ್ರ್ಯವಿದೆಯೆಂದು ತೋರಿಸುವ ಸಾಧನ. ಮೂರು ಎನ್ನುವ ಸಂಖ್ಯೆ ಕೆಲ್ಟರಿಗೆ ಪವಿತ್ರ. ಈ ತ್ರಿವಳಿ ದೇವತೆಗಳಲ್ಲಿ ಸ್ತ್ರೀಯರೂ ಪುರುಷರೂ ಇದ್ದರು. ಮೊರ್ರಿಗನ್, ಬದ್ಬ್ ಮತ್ತು ನೆಮಿಯನ್ ತ್ರಿವಳಿ ಸ್ತ್ರೀ ದೇವತೆಗಳು. ಮೂರು ಮುಖಗಳುಳ್ಳ ಅನೇಕ ವಿಗ್ರಹಗಳು ದೊರಕಿವೆ. ಕೆಲ್ಟರು ಮರಗಳನ್ನು ಪೂಜಿಸುತ್ತಿದ್ದರೆಂದು ಅನೇಕ ಬರಹಗಳಿಂದಲೂ ಐರಿಷ್ ಶಾಸನಗಳಿಂದಲೂ ತಿಳಿದುಬರುತ್ತದೆ. ಓಕ್ ಮತ್ತು ಬೀಚ್ ವೃಕ್ಷದೇವತೆಗಳ ಉಲ್ಲೇಖ ಅಲ್ಲಲ್ಲಿ ಕಂಡುಬರುತ್ತದೆ. ಕಲ್ಲಿನ ಅನೇಕ ವಿಗ್ರಹಗಳು ಪೂಜೆಗೋಸ್ಕರ ಮಾಡಿದವಾಗಿದ್ದಿರಬಹುದು. ಕಟ್ಟಡವಿಲ್ಲದ ಅನೇಕ ಸ್ಥಳಗಳು ಕೆಲ್ಟರಿಗೆ ಪೂಜಾರ್ಹವಾಗಿದ್ದುವು. ಇವುಗಳಲ್ಲದೆ ಪೂಜಾಮಂದಿರಗಳೂ ಇದ್ದುವು. ಪೂಜಾಮಂದಿರಗಳ ಸ್ವರೂಪವೇನೆಂಬುದು ತಿಳಿದುಬಂದಿಲ್ಲ. ಫ್ರಿಲ್‍ಫೋರ್ಡ್ ಎಂಬಲ್ಲಿರುವ ಕುದುರೆಲಾಳಾಕೃತಿಯ ಕಟ್ಟಡ ಕೆಲ್ಟರ ದೇವಾಲಯವಾಗಿದ್ದಿರಬಹುದು. ರೋಮನರ ಪ್ರಭಾವದಿಂದ ಕೆಲ್ಟರು ಚೌಕಾಕೃತಿಯ ದೇವಾಲಯಗಳನ್ನು ಕಟ್ಟಲು ಪ್ರಾರಂಭಿಸಿದರು. ಈ ರೀತಿಯ ದೇವಾಲಯಗಳಲ್ಲಿ ಚೌಕನೆಯ ಗರ್ಭಗುಡಿ ಮತ್ತು ಅದರ ಸುತ್ತಲೂ ಮಂಟಪ ಇವೆ. ಮಂಟಪದ ಮುಂಭಾಗದಲ್ಲಿ ಜನರು ಸೇರುತ್ತಿದ್ದರು. ಗಾಲ್‍ನಲ್ಲಿ ದೇವಾಲಯಗಳು ಚೌಕಾಕೃತಿ, ಅಷ್ಟಕೋನಾಕೃತಿ ಮತ್ತು ವೃತ್ತಾಕೃತಿಯಲ್ಲಿವೆ. ಮಧ್ಯ ಸ್ಪೇನ್ ಮತ್ತು ಉತ್ತರ ಪೋರ್ಚುಗಲ್‍ಗಳ ಬೆಟ್ಟದ ಮೇಲಿನ ಕೋಟೆಗಳಲ್ಲಿ ಗೂಳಿ ಮತ್ತು ಹಂದಿಗಳ ದೊಡ್ಡ ಗಾತ್ರದ ಕಲ್ಲಿನ ಶಿಲ್ಪಗಳು ದೊರಕಿವೆ. ಇವು ಫಲಶಕ್ತಿಯ ದೇವತೆಗಳೆಂದೂ ಮೆಡಿಟರೇನಿಯನ್ ಸಂಸ್ಕøತಿಯ ಪ್ರಭಾವವೆಂದೂ ಊಹಿಸಲಾಗಿದೆ. 

ದೇವತೆಗಳ ತೃಪ್ತಿಗೋಸ್ಕರ ಮಾನವರನ್ನೂ ಪಶುಗಳನ್ನು ಬಲಿಕೊಡುವ ಪದ್ಧತಿ ಇವರಲ್ಲಿ ಬೇರೂರಿತ್ತು. ಐರ್ಲೆಂಡಿನಲ್ಲಿ ಸಮಾಯಿನ್ ಹಬ್ಬದಲ್ಲಿ ಮಾನವರನ್ನು ಬಲಿ ಕೊಡುತ್ತಿದ್ದರೆಂದು ತಿಳಿಯುತ್ತದೆ. ಒಂದು ಕಥೆಯ ಪ್ರಕಾರ ಒಬ್ಬ ಕನ್ಯೆಯನ್ನು ಐರ್ಲೆಂಡಿನ ಕೆಲವು ಪುರುಷರು ಪ್ರೇಮಿಸಿದರು. ಪ್ರತಿಯೊಬ್ಬ ಪ್ರೇಮಿಯ ಪರವಾಗಿಯೂ ಅವನ ಕಡೆಯವನೊಬ್ಬನನ್ನು ಬಲಿ ಕೊಡಲಾಯಿತು. ಮತ್ತೊಂದು ಕಥೆಯ ಪ್ರಕಾರ ರಾಜನೊಬ್ಬ ಅಪರಿಚಿತ ಸ್ತ್ರೀಯೊಂದಿಗೆ ಸಂಬಂಧವನ್ನು ಹೊಂದಿದ್ದುದರಿಂದ ರಾಜ್ಯಕ್ಕೆ ವಿಪತ್ತುಗಳು ಬಂದೊದಗಿದುವು. ಇವನ್ನು ನಿವಾರಿಸಲು ಪಾಪವನ್ನರಿಯದ ದಂಪತಿಗಳ ಪುತ್ರನನ್ನು ಬಲಿಕೊಡಲು ತೀರ್ಮಾನಿಸಲಾಯಿತು. ಈ ರೀತಿಯ ಹಲವಾರು ಕಥೆಗಳುಂಟು. ಕೆಲ್ಟರಲ್ಲಿ ಡ್ರೂಯಿಡ್ ಎನ್ನುವ ಮಾಂತ್ರಿಕ ಅಥವಾ ಪುರೋಹಿತನಿರುತ್ತಿದ್ದ. ಮತೀಯ ಸಂಬಂಧಿಸಿದ ಸಾಹಿತ್ಯವನ್ನು ಬಾಯಿಪಾಠದ ಮೂಲಕ ಇವನು ತನ್ನ ಶಿಷ್ಯರಿಗೆ ಹೇಳಿಕೊಡುತ್ತಿದ್ದ. ಆದ್ದರಿಂದ ಕೆಲ್ಟರ ಮತೀಯ ಸಾಹಿತ್ಯ ಪುರಾಣಗಳು ಬಹುಕಾಲದ ವರೆಗೆ ಬಾಯಿಪಾಠದ ಮೂಲಕವೇ ಬೆಳೆದವು.

ಕೆಲ್ಟರ ಕಲೆಯ ಬಗ್ಗೆ ನಡೆದ ಸಂಶೋಧನೆ ಪ್ರಾಚೀನ ವಿಶ್ವದ ಪುರಾತತ್ವದ ಮುಖ್ಯ ಅಧ್ಯಯನಗಳಲ್ಲೊಂದು. ಶಿಲ್ಪ ಮತ್ತು ಅಲಂಕಾರಿಕ ವಿನ್ಯಾಸಗಳಲ್ಲಿ ಕೆಲ್ಟಿಕ್ ಕಲೆಯ ಕೊಡುಗೆಗಳು ಗಮನಾರ್ಹ. ದಕ್ಷಿಣ ಫ್ರಾನ್ಸಿನ ಕೆಲ್ಟಿಕ್ ಕಲೆ ಮೆಡಿಟರೇನಿಯನ್, ಎಟ್ರಸ್ಕನ್ ಮತ್ತು ಗ್ರೀಕ್ ಕಲಾಸಂಪ್ರದಾಯಗಳಿಂದ ಪ್ರಭಾವಿತಗೊಂಡಿದೆ. ಕೆಲ್ಟರ ಶೌರ್ಯಪ್ರಧಾನವಾದ ಶಿಲ್ಪಗಳು ವಿಶೇಷವಾಗಿ ಮೃತರಾದ ಶೂರರಿಗೆ ಸಂಬಂಧಿಸಿದವು. ಈ ಶಿಲ್ಪಗಳಲ್ಲಿ ಯುದ್ಧದ ಉಡುಗೆಗಳು ಎದ್ದು ಕಾಣುತ್ತವೆ. ಹೆಚ್ಚು ದಪ್ಪವಿಲ್ಲದ ಶರೀರ, ವಿಶಾಲವಾದ ಎದೆ, ಅಗಲವಾದ ಹಣೆ ಮತ್ತು ಬಾಯಿ, ಎದ್ದುಕಾಣುವ ಕೆನ್ನೆಯೆಲಬುಗಳು, ಗೋಪುರಾಕಾರದಲ್ಲಿ ಎತ್ತಿಕಟ್ಟಿದ ಕೂದಲು ಮುಂತಾದವು ಈ ಶಿಲ್ಪಗಳ ಪ್ರಮುಖ ಲಕ್ಷಣಗಳು. ಇವು ಯೂರೋಪಿನಲ್ಲಿ ಎಲ್ಲ ಕಡೆಗಳಿಗೂ ಹರಡಿದ್ದುವು. ಮೆಡಿಟರೇನಿಯನ್ ಕೆಲ್ಟರಲ್ಲಿ ಶೂರರ ಶಿಲ್ಪಗಳ ಜೊತೆಗೆ ಅಮಾನುಷ ಮತ್ತು ವಿಲಕ್ಷಣ ಪ್ರಾಣಿಗಳ ಶಿಲ್ಪಗಳೂ ವಿಶೇಷವಾಗಿ ಕಂಡುಬರುತ್ತವೆ. ಮೆಡಿಟರೇನಿಯನ್ ಕೆಲ್ಟರ ಶಿಲ್ಪ ಇತರ ಕೆಲ್ಟರ ಶಿಲ್ಪಗಳಿಗಿಂತ ಹೆಚ್ಚು ಕಲಾತ್ಮಕವಾದ್ದು. ಕಲ್ಲಿನ ಶಿಲ್ಪಗಳಲ್ಲದೆ ಕಂಚಿನ ವಿಗ್ರಹಗಳೂ ದೊರಕಿವೆ. ಬೌರ್ ಎಂಬಲ್ಲಿ ದೊರಕಿರುವ ಕಂಚಿನ ದೇವತಾಶಿಲ್ಪ ಬಹು ಕಲಾತ್ಮಕವಾಗಿದೆ. ಹಿಂಭಾಗದ ಮತ್ತು ಮುಂಭಾಗದ ಎರಡು ಕಂಚಿನ ಭಾಗಗಳನ್ನು ಕೂಡಿಸಿ ಈ ವಿಗ್ರಹಗಳನ್ನು ತಯಾರಿಸಲಾಗಿದೆ. ಕಂಚಿನ ಮುಖವಾಡಗಳು, ಗುಂಡನೆಯ ಮುಖ, ಅಗಲವಾದ ಬಾಯಿ, ತ್ರಿಕೋನಾಕಾರದ ಮೂಗು, ಗೆರೆಗಳಿಂದ ಗುರುತಿಸಬಹುದಾದ ಗಡ್ಡ ಮುಂತಾದ ಲಕ್ಷಣಗಳು ಇರುತ್ತದೆ. ಉತ್ತರ ಭಾಗದ ಕೆಲ್ಟರಲ್ಲಿ ಪೂಜಾಸ್ತಂಭಗಳನ್ನು ವಿಶೇಷ ಕಲಾವಂತಿಕೆಯಿಂದ ತಯಾರಿಸಲಾಗುತ್ತಿತ್ತು. ಇವನ್ನು ಜ್ಯೂಪಿಟರ್ ಕಂಬಗಳೆಂದು ಕರೆಯಲಾಗಿದೆ. ಇವುಗಳ ಮೇಲೆ ಕಾಣಬರುವ ಬರಹಗಳಿಂದ ಈ ಕಂಬಗಳು ಜ್ಯೂಪಿಟರ್ ದೇವತೆಗೋಸ್ಕರ ತಯಾರಾದವೆಂದು ಗೊತ್ತಾಗುತ್ತದೆ. ರೋಮನರ ಪ್ರಭಾವ ಇದರಲ್ಲಿ ಕಾಣಬರುತ್ತದೆ. ಕೆಳಭಾಗದ ಪೀಠ ಚೌಕವಾಗಿದ್ದು, ಅದರಲ್ಲಿ ರೋಮನ್ ವೀರನೊಬ್ಬನ ಅರೆ ಉಬ್ಬು ಶಿಲ್ಪವಿದೆ. ಮೇಲೆ ಹೋದಂತೆ ಕಂಬ ಸಣ್ಣಗಾಗುತ್ತಾ ತುದಿಯಲ್ಲಿ ಕೆಲ್ಟರ ವೀರನೊಬ್ಬನ ಅಥವಾ ದೇವತೆಯ ಶಿಲ್ಪವಿದೆ.

ಅಲಂಕಾರ ವಿನ್ಯಾಸಗಳಲ್ಲಿ ಕೆಲ್ಟರ ಅಭಿರುಚಿ ವಿಶಿಷ್ಟವಾದ್ದು. ಅವರು ಆ ಕಲೆಯನ್ನು ಬಹು ಚೆನ್ನಾಗಿ ಸಾಧಿಸಿದ್ದರು. ಜ್ಯಾಮಿತಿಯ ಚಿಹ್ನೆಗಳನ್ನು ಅನೇಕ ರೀತಿಗಳಲ್ಲಿ ಬಳಸಿ ಒಂದು ನೂತನ ವಿನ್ಯಾಸವನ್ನೇ ಸೃಷ್ಟಿಸಿದ್ದರು. ವಿವಿಧ ರೀತಿಯಲ್ಲಿ ಸೇರಿಸಿದ ಚುಕ್ಕಿಗಳು, ರೇಖೆಗಳು, ಅರ್ಧ ಮತ್ತು ಪೂರ್ಣವೃತ್ತಗಳನ್ನು ಒಳಗೊಂಡ ಕತ್ತಿಯ ಹಿಡಿಗಳು, ಪಾತ್ರೆಗಳು ಮುಂತಾದವು ಕಲಾತ್ಮಕವಾಗಿರುತ್ತಿದ್ದುವು. ಲಾ ಟೆನೆ ಸಂಸ್ಕøತಿಯ ಕಾಲದಲ್ಲಂತೂ ಈ ಪ್ರವೃತ್ತಿ ವಿಶೇಷ ಪ್ರಾಮುಖ್ಯ ಪಡೆಯಿತು. ಕೆಲ್ಟರ ನಾಣ್ಯಗಳು ಈ ದೃಷ್ಟಿಯಿಂದ ಬಹು ಗಮನಾರ್ಹವಾದವು.

ಕೆಲ್ಟರ ಕಲೆ ಐರೋಪ್ಯ ಕಲೆಗೆ ಭದ್ರಬುನಾದಿಯನ್ನು ಹಾಕಿತು. ರೋಮನರ ಪ್ರಭಾವ ಹೆಚ್ಚಿದಾಗ ಹೊಸ ಕಲಾಸಂಪ್ರದಾಯ ಬೆಳೆಯಿತಾದರೂ, ಪ್ರಾಚೀನ ಕೆಲ್ಟಿಕ್ ನಮೂನೆಗಳು ರೋಮನ್ ಕಲಾವಿದರಿಗೂ ಸ್ಫೂರ್ತಿದಾಯಕವಾಗಿದ್ದುವು. ಈ ದೃಷ್ಟಿಯಿಂದ ಐರೋಪ್ಯ ಕಲೆಗೆ ಕೆಲ್ಟಿಕ್ ಜನಾಂಗಗಳ ಕೊಡುಗೆ ಮುಖ್ಯವಾದ್ದು. 					

  (ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ